“ಶುದ್ಧತೆ, ತಾಳ್ಮೆ ಮತ್ತು ಪರಿಶ್ರಮ ಮಂತ್ರ ನಮ್ಮ ಯುವ ಜನತೆಯನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ” ಸ್ವಾಮಿ ವಿವೇಕಾನಂದರ ಈ ಮಾತು ಪ್ರಸ್ತುತ ದಿನಗಳಲ್ಲಿ ಅಗತ್ಯವೆನಿಸುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಬಹಳ ಪ್ರಾಮುಖ್ಯವಾದದ್ದು. ಯುವಶಕ್ತಿಯೇ ಅಭಿವೃದ್ಧಿಯ ಹರಿಕಾರರಾಗಿದ್ದು ಅವರಲ್ಲಿರುವ ಕೌಶಲ್ಯ ಮತ್ತು ಪ್ರತಿಭೆಗಳನ್ನು ಬೆಳೆಸುವ ಕೆಲಸವಿಂದು ಆಗಬೇಕಾಗಿದೆ. ಜಗತ್ತಿನಾದ್ಯಂತ ಸರಿ ಸುಮಾರು 18 ಬಿಲಿಯನ್ನಷ್ಟು ಯುವ ಜನರಿದ್ದು, ಭಾರತದಲ್ಲಿ 356 ಮಿಲಿಯನ್ ನಷ್ಟು ಯುವ ಜನರಿದ್ದಾರೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಅತೀ ಹೆಚ್ಚು ಯುವ ಜನರನ್ನು ಹೊಂದಿರುವ ದೇಶ ಭಾರತ ಎಂಬ ಕೀರ್ತಿಗೆ ನಮ್ಮ ದೇಶ ಭಾಜನವಾಗಿದೆ. ಈ ಕಾರಣದಿಂದ ಭಾರತವನ್ನು ಯುವ ಭಾರತ ಎಂದು ಕರೆದರೂ ಅತಿಶಯೋಕ್ತಿ ಎನಿಸಲಾರದು.
ಕೇವಲ ಯುವಶಕ್ತಿ ದೇಶದಲ್ಲಿದ್ದ ಮಾತ್ರಕ್ಕೆ ಆ ದೇಶ ಮುಂದುವರಿಯುತ್ತಿದೆ ಎಂದು ಅರ್ಥವಲ್ಲ. ಯುವಶಕ್ತಿಯನ್ನು ಬೆಳವಣಿಗೆಯ ಅಸ್ತ್ರವನ್ನಾಗಿ ಹಾಗು ಸಂಪನ್ಮೂಲವನ್ನಾಗಿ ಯಶಸ್ವಿಯಾಗಿ ಬಳಸಿಕೊಂಡಾಗ ಮಾತ್ರ ದೇಶ ಮುಂದುವರಿಯುವುದು ಸಾಧ್ಯವಾಗುತ್ತದೆ.ವಿಶ್ವದ ಬಹುತೇಕ ಮುಂದುವರೆದ ರಾಷ್ಟಗಳಲ್ಲಿ ದುಡಿಯುತ್ತಿರುವ ಇಂಜಿನಿಯರ್ ಗಳು, ವೈದ್ಯರು, ವಿಜ್ಞಾನಿಗಳು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ನಮ್ಮ ಭಾರತದಂತಹ ಮುಂದುವರೆಯುತ್ತಿರುವ ರಾಷ್ಟ್ರದ ಯುವ ಜನರೇ ಆಗಿದ್ದಾರೆ.
ಇಂದು ನಮ್ಮ ದೇಶದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ ಯುವ ಸಮೂಹದ ಮನಸ್ಥಿತಿ, ವರ್ತನೆಗಳನ್ನು ನೋಡಿದಾಗ ನಮ್ಮ ದೇಶದ ಬಹುಮುಖ್ಯ ಸಂಪನ್ಮೂಲವೇ ಪೋಲಾಗುತ್ತಿರುವಂತೆ ಭಾಸವಾಗುತ್ತಿದೆ. ಪ್ರತಿ ನಿತ್ಯ ಗಲಭೆ, ಹಿಂಸಾಚಾರ, ಕೋಮು ಸಂಘರ್ಷಗಳಲ್ಲಿ ಎದ್ದು ಕಾಣುವ ಯುವಕರ ಆಕ್ರೋಶಭರಿತ ಮುಖಗಳು ವರ್ತಮಾನದ ದುರಂತ ಕಥೆಗಳನ್ನು ಹೇಳುತ್ತಿವೆ. ಎಲ್ಲಕ್ಕಿಂತ ಹೆಚ್ಚಾಗಿ ಯುವ ಜನತೆ ಮಾದಕವ್ಯಸನಿಗಳಾಗಿರುವುದು ದುರಂತವೇ ಸರಿ. ಪ್ರಸ್ತುತ ರಾಜಕೀಯ ವ್ಯವಸ್ಥೆ ಸಮಾಜದ ಹಿತಕ್ಕಿಂತ ಸ್ವಹಿತವೇ ಮುಖ್ಯವೆಂದುಕೊಂಡ ರಾಜಕಾರಣಿಗಳ ದಂಡು, ಧರ್ಮದ ಅಮಲನ್ನು ನೆತ್ತಿಗೇರಿಸಿಕೊಂಡ ಸಂಘಟನೆಗಳು, ಜನಪ್ರಿಯತೆಗಾಗಿ ಹಪಹಪಿಸುತ್ತಿರುವ ನಾಯಕರು, ಹೀಗೆ ಸಮಾಜಕ್ಕೆ ಹೊರೆಯೇ ಆಗಿರುವ ಈ ಗುಂಪಿನೊಳಗೆ ಗೊತ್ತೋ ಗೊತ್ತಿಲ್ಲದೆಯೇ ಸೇರಿಕೊಂಡಿರುವವರಲ್ಲಿ ಯುವ ಸಮೂಹದ ಪಾಲು ದೊಡ್ಡದಿದೆ. ಯುವಜನರನ್ನು ತಮ್ಮ ಕಾರ್ಯಕರ್ತರುಗಳನ್ನಾಗಿ, ಪ್ರಚಾರಕರನ್ನಾಗಿ ಗುರಾಣಿಗಳನ್ನಾಗಿ ಬಳಸಿಕೊಳ್ಳುವ ರಾಜಕೀಯ ವ್ಯವಸ್ಥೆ, ರಾಜಕಾರಣಿಗಳು ಹೊಸಬರೇನಲ್ಲ. ಇತಿಹಾಸದುದ್ದಕ್ಕೂ ತಮ್ಮ ರಕ್ಷಣೆಗಾಗಿ ಹೀಗೆ ಸಶಕ್ತ ಪಡೆಯನ್ನು ಸುತ್ತಲೂ ಇಟ್ಟುಕೊಂಡು ಕೊನೆಗೆ ಅವರನ್ನೇ ಬಲಿಪಶುಗಳನ್ನಾಗಿಸಿದ ಉದಾಹರಣೆಗಳು ಇತ್ತೀಚೆಗೆ ನಮ್ಮ ಕಣ್ಣೆದುರು ನಡೆದಿವೆ.
ಯುವಜನತೆಗೆ ಕಿವಿಮಾತು:-
ಆಂಗ್ಲ ಭಾಷೆಯಲ್ಲಿ “Empty mind is Devil factory” ಮಾತು ಇದೆ. ಪ್ರಸ್ತುತ ವಿದ್ಯಮಾನದಲ್ಲಿ ನಿರುದ್ಯೋಗದಿಂದ ಯುವ ಜನತೆ ತಪ್ಪು ಹಾದಿ,ದುಶ್ಚಟ, ಮಾದಕವ್ಯಸನಿಗಳಾಗಿ ಬದಲಾಗುತ್ತಿರುವ ಕಳವಳಕಾರಿ ವಿಷಯವಾಗಿದೆ. ಯುವ ಮನಸು ಕಲುಷಿತಗೊಳ್ಳುತ್ತಿರುವುದನ್ನು ತಪ್ಪಿಸಲು,ವಿದ್ಯಾರ್ಥಿಗಳಲ್ಲಿ ದ್ವೇಷ ಮನೋಭಾವ ಬಿತ್ತುವ ಸೈದ್ಧಾಂತಿಕ, ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ದಾಳವಾಗಿಸಿಕೊಂಡು ಸಂಘರ್ಷಕ್ಕೆ ಪ್ರೇರೇಪಿಸುವ ಸಂಘಟನೆಗಳಿಂದ ದೂರ ಉಳಿಯುವುದು,ದುಶ್ಚಟ ಹೊಂದಿರುವ ಮಿತ್ರರ ಸಹವಾಸ ಮಾಡದೇ ಇರುವುದು. ಶಿಕ್ಷಣದ ಜೊತೆ ಜೊತೆಗೆ ಉದ್ಯೋಗಕ್ಕೆ ಸಂಬಂಧಪಟ್ಟಂತೆ ವಿವಿಧ ಪರೀಕ್ಷೆಗಳ ಬರೆಯುವುದು. ಜೀವನ ಕೌಶಲ್ಯದಂತಹ ತರಬೇತಿಯನ್ನು ಪಡೆಯುವುದು. ಉದ್ಯೋಗದ ಕಡೆಗೆ ಚಿತ್ತ ಹರಿಸಿ ತಮ್ಮ ಕಾಲ ಮೇಲೆ ನಿಂತುಕೊಂಡು ಮನೆಯ ಜವಾಬ್ದಾರಿ ಹೊರುವ ಪ್ರಯತ್ನ ಮಾಡುವುದು ಒಳಿತು. ಯುವಕರ ನಡತೆ ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ಉತ್ತಮವಾದ ಪಾತ್ರವಹಿಸಬೇಕು. ದೇಶದ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಯುವ ಜನಾಂಗ ನಿಲ್ಲಲಿ ಎಂಬ ಆಶಯ ನನ್ನದು.
✍️ನಾರಾಯಣ ಕುಂಬ್ರ
ಲ್ಯಾಬ್ ಸಹಾಯಕರು
ರಸಾಯನ ಶಾಸ್ತ್ರ ವಿಭಾಗ,
ವಿವೇಕಾನಂದ ಕಾಲೇಜು
ನೆಹರು ನಗರ ಪುತ್ತೂರು.
ದ. ಕ.574203